ಮಲೇಷ್ಯ
ಆಗ್ನೇಯ ಏಷ್ಯಾದಲ್ಲಿರುವ ಒಂದು ಒಕ್ಕೂಟ ಗಣರಾಜ್ಯ. ಮಲಯಾಪರ್ಯಾಯ ದ್ವೀಪದಲ್ಲಿರುವ ಪಶ್ಚಿಮ ಮಲೇಷ್ಯ, ಬೋರ್ನಿಯೋ ದ್ವೀಪದ ಉತ್ತರ ಮತ್ತು ಈಶಾನ್ಯದಲ್ಲಿರುವ ಸಾರಾವಾಕ್ ಮತ್ತು ಸಬಾಗಳಿಂದ ಕೂಡಿದ ಪೂರ್ವ ಮಲೇಷ್ಯ ಈ ಪ್ರದೇಶಗಳನ್ನೊಳಗೊಂಡ ಒಂದು ಒಕ್ಕೂಟ. ಪಶ್ಚಿಮ ಮಲೆಷ್ಯ ಉ. ಅ. 60 40'. ದಕ್ಷಿಣಕ್ಕಿರುವ ಮಲಯಪರ್ಯಾಯ ದ್ವೀಪ ಭಾಗ. ಇದರ ಉತ್ತರಕ್ಕೆ ಥೈಲೆಂಡ್. ದಕ್ಷಿಣಕ್ಕೆ ಸಿಂಗಪುರ ದ್ವೀಪ ಗಣರಾಜ್ಯ, ಆಗ್ನೇಯಕ್ಕೆ ಮಲಕ್ಕಾ ಜಲಸಂಧಿಯಿಂದಾಚೆಗೆ ಇಂಡೋನೇಷ್ಯದ ಸುಮಾತ್ರ ದ್ವೀಪ, ಪೂರ್ವಕ್ಕೆ ದಕ್ಷಿಣ ಚೀನ ಸಮುದ್ರ ಇವೆ. ಥೈಲೆಂಡಿನೊಂದಿಗೆ ಈ ಭಾಗ ಹೊಂದಿರುವ ಗಡಿಯ ಉದ್ದ ಸುಮಾರು 480 ಕಿಮೀ, ಸಾರವಾಕ್ ಮತ್ತು ಸಬಾಗಳನ್ನೊಳಗೊಂಡ ಪೂರ್ವ ಮಲೇಷ್ಯಕ್ಕೂ ಪಶ್ಚಿಮ ಮಲೇಷ್ಯಕ್ಕೂ ನಡುವೆ ದಕ್ಷಿಣ ಚೀನ ಸಮುದ್ರವಿದೆ. ಬೋರ್ನಿಯೋ ದ್ವೀಪದ ವಾಯುವ್ಯ ಕರಾವಳಿ ಪ್ರದೇಶದ ಬಹುಭಾಗವನ್ನು ಪಶ್ಚಿಮ ಮಲೇಷ್ಯದ ಸಾರವಾಕ್ ಮತ್ತು ಸಭಾಗಳು ಒಳಗೊಂಡಿವೆ. ಅಕ್ಕಪಕ್ಕಗಳಲ್ಲಿರುವ ಸಾರವಾಕ್ ಮತ್ತು ಸಬಾಗಳ ನೆಲದ ಗಡಿಯಾಚೆ ಬೋರ್ನಿಯೋದ ಉಳಿದ ಭಾಗವಾದ, ಇಂಡೊನೇಷ್ಯಕ್ಕೆ ಸೇರಿದ, ಕಾಲಿಮಾಂಟನ್ ಇದೆ. ಸಾರವಾಕಿನ ನಡುವೆ, ದಕ್ಷಿಣ ಚೀನ ಸಮುದ್ರಕ್ಕೆ ಹೊಂದಿಕೊಂಡಂತೆ ಇರುವ ಬ್ರೂನೈ ಒಂದು ಸ್ವತಂತ್ರ ಸುಲ್ತಾನ್ ಪ್ರಭುತ್ವ (ನೋಡಿ- ಬ್ರೂನೈ) ಮಲೇಷ್ಯ ಒಕ್ಕೂಟದ ವಿಸ್ತೀರ್ಣ 3,29,758 ಚಕಿಮೀ. ಜನಸಂಖ್ಯೆ 2,22,99,000(2000) ರಾಜಧಾನಿ ಕ್ವಾಲಾಲುಂಪುರ್.

ಭೌತಲಕ್ಷಣ : ಬರ್ಮ, ಥೈಲೆಂಡ್‍ಗಳ ದಕ್ಷಿಣಕ್ಕೆ ಕಿರಿದಾಗಿ ಚಾಚಿರುವ ಪರ್ವತಮಯ ಪ್ರದೇಶ ಪಶ್ಚಿಮ ಮಲೇಷ್ಯ. ಇದರ ಅರ್ಧಕ್ಕಿಂತ ಹೆಚ್ಚು ಭಾಗ 152, 33 ಮೀಟರ್‍ಗಿಂತ ಹೆಚ್ಚು ಎತ್ತರವಾಗಿದೆ. ದಕ್ಷಿಣೋತ್ತರವಾಗಿ ಹಬ್ಬಿರುವ ಪರ್ವತ ಶ್ರೇಣಿಗಳು ಕಡಿದಾಗಿವೆ. ಇವುಗಳಲ್ಲಿ ಮುಖ್ಯವಾದ್ದು 914.4 ಮೀಟರ್‍ಗಿಂತ ಹೆಚ್ಚು ಎತ್ತರವಿದೆ. ಇವುಗಳ ಉನ್ನತ ಶಿಖರಗಳು ಸುಮಾರು 2133 ಮೀಟರ್‍ಗಳಿಗೂ ಮೇಲೆ ಏರಿವೆ. ಈ ಶ್ರೇಣಿಯ ಉದ್ದ ಸುಮಾರು 480 ಕಿಮೀ ನಡುವೆ ಹಬ್ಬಿರುವ ಪರ್ವತ ಶ್ರೇಣಿಗಳ ಅಚೀಚೆಯ ಪೂರ್ವ ಪಶ್ಚಿಮಗಳ ಕರಾವಳಿಗಳ ಪ್ರದೇಶ ತಗ್ಗು ನೆಲ. ಪಶ್ಚಿಮ ಕರಾವಳಿ ಹೆಚ್ಚು ಅಭಿವೃದ್ಧಿ ಹೊಂದಿದೆ. ಇಲ್ಲಿಯದು ಉಷ್ಣ ಹಾಗೂ ತೇವದ ವಾಯುಗುಣ.

ಪಶ್ಚಿಮ ಮಲೇಷ್ಯದಲ್ಲಿ ಅನೇಕ ನದಿಗಳು ಹರಿಯುತ್ತವೆ. ಅತ್ಯಂತ ಉದ್ದವಾದ್ದು (332 ಕಿಮೀ) ಸುಂಗೈ ಪಹಾಂಗ್. ನದಿಗಳಲ್ಲಿ ಯಾವಾಗಲೂ ನೀರಿರುತ್ತದೆ. ಮಳೆಗಾಲದಲ್ಲಿ ಪ್ರವಾಹದಿಂದ ಅನಾಹುತವಾಗುವುದೂ ಉಂಟು.

ಪಶ್ಚಿಮ ಮಲಯದ್ದು ಸಮಭಾಜಕವೃತ್ತ ಪ್ರದೇಶದ ವಾಯುಗುಣ. ಆದರೆ ಈ ಪ್ರದೇಶ ಕಿರಿದಾಗಿರುವುದರಿಂದ ಸಾಗರಿಕ ಪ್ರಭಾವಕ್ಕೆ ಒಳಗಾಗಿದೆ. ಮಾನ್ಸೂನ್ ಕೂಡ ಇದರ ಮೇಲೆ ಪ್ರಭಾವ ಬೀರುತ್ತದೆ. ಪ್ರದೇಶ ಹಾಗೂ ಎತ್ತರಕ್ಕೆ ಅನುಗುಣವಾಗಿ ಮಳೆ ವ್ಯತ್ಯಾಸವಾಗುತ್ತದೆ. ಉಷ್ಣತೆ ಸಾಮಾನ್ಯವಾಗಿ ಅಧಿಕವಾಗಿಯೇ (250ಛಿ -280ಛಿ) ಇರುತ್ತದೆ. ಒಟ್ಟಿನಲ್ಲಿ ಇಲ್ಲಿಯದು ಉಷ್ಣ ಹಾಗೂ ತೇವದ ವಾಯುಗುಣ.

ಪೂರ್ವ ಮಲೇಷ್ಯ ಸುಮಾರು 1075 ಕಿಮೀ ಉದ್ದ ಹಾಗೂ 260 ಕಿಮೀ ಅಗಲವಾಗಿ ಬೋರ್ನಿಯೋ ದ್ವೀಪದ ಉತ್ತರ ಭಾಗದಲ್ಲಿ ಹಬ್ಬಿದೆ. ಇದರ ಕರಾವಳಿಯ ಉದ್ದ ಸುಮಾರು 2250 ಕಿಮೀ, ಕಾಲೆಮಾಂಟನ್‍ಗೂ ಪೂರ್ವ ಮಲೇಷ್ಯಕ್ಕೂ ನಡುವಣ ಗಡಿಯ ಉದ್ದ ಸುಮಾರು 1450 ಕಿಮೀ. ಪೂರ್ವ ಮಲೇಷ್ಯವನ್ನು ಮೂರು ಪ್ರಾಕೃತಿಕ ವಿಭಾಗಗಳಾಗಿ ಮಾಡಬಹುದು. ಉತ್ತರದ ಕರಾವಳಿಯ ಮೈದಾನ ಪ್ರದೇಶ 16 ಕಿಮೀಗಳಿಂದ 65 ಕಿಮೀವರೆಗೆ ಅಗಲವಾಗಿದೆ. ಕರಾವಳಿಯ ಮಗ್ಗುಲಿಗೆ ಪರ್ವತ ಹಾಗೂ ಕಣಿವೆಗಳು ಹಬ್ಬಿವೆ. ಇಲ್ಲಿಯ ನೆಲದ ಎತ್ತರ ಸಾಮಾನ್ಯವಾಗಿ 304 ಮೀಟರ್, ಕೆಲವೆಡೆ ಇದು 608 ಮೀಟರ್‍ವರೆಗೂ ಎತ್ತರವಾಗಿದೆ. ಕಾಲಿಮಾಂಟನನ್ನು ಪ್ರತ್ಯೇಕಿಸುವ ಉನ್ನತ ಪರ್ವತಶ್ರೇಣಿ ಇದರ ಮಗ್ಗುಲಿನಲ್ಲಿದೆ. ಇದು ಒಂದು ರೀತಿಯಲ್ಲಿ ಪೂರ್ವ ಮಲೇಷ್ಯದ ಬೆನ್ನೆಲುಬಿನಂತಿದೆ, ಇದರಲ್ಲಿ ಸುಮಾರು 1216 ಮೀಟರ್‍ಗಳಿಂದ 2133 ಮೀಟರ್‍ವರೆಗೆ ಎತ್ತರವಾಗಿರುವ ಆನೇಕ ಶಿಖರಗಳುಂಟು. ಅತ್ಯುನ್ನತ ಶಿಖರ ಕಿನಬಾಲು ಸುಮಾರು 4101 ಮೀಟರ್ ಎತ್ತರವಿದೆ.

ಪೂರ್ವ ಮಲೇಷ್ಯದ ನದಿಗಳು ಸದಾ ಹರಿಯುತ್ತವೆ. ಸಾರವಾಕ್‍ನ ಅತ್ಯಂತ ಉದ್ದವಾದ (ಸುಮಾರು 560ಕಿಮೀ) ನದಿ ರಾಜಾಂಗ್. ಇದರ ಮುಖದಿಂದ ಸುಮಾರು 260 ಕಿಮೀ ದೂರ ಸಣ್ಣ ದೋಣಿಗಳು ಸಂಚರಿಸುವುವು. ಸಬಾದ ಅತ್ಯಂತ ಉದ್ದವಾದ ನದಿ ಕಿನಾಬಾಟಾಂಗ್‍ನಲ್ಲಿ ಸುಮಾರು 195 ಕಿಮೀ ದೂರ ದೋಣಿ ಸಂಚಾರ ಮಾಡಬಹುದು. ನದಿಗಳು ಒಳನಾಡಿನೊಂದಿಗೆ ಸಂಪರ್ಕ ಕಲ್ಪಿಸುವುದರಿಂದ ಹೆಚ್ಚು ಪ್ರಾಮುಖ್ಯ ಪಡೆದಿದೆ.

ಪೂರ್ವ ಮಲೇಷ್ಯದಲ್ಲಿ ಉಷ್ಣ ಹಾಗೂ ತೇವದ ವಾಯುಗುಣವಿದೆ. ಇಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಮಳೆ ವ್ಯತ್ಯಾಸವಾಗುತ್ತದೆ. ಕನಿಷ್ಟ ಉಷ್ಣತೆ 200ಛಿ —250ಛಿ, ಆದರೆ ಗರಿಷ್ಟ 310ಛಿ-330ಛಿ ಇದು ಕೂಡ ಮಾನ್ಸೂನ್ ಪ್ರಭಾವಕ್ಕೆ ಒಳಗಾಗುತ್ತದೆ. ಅತಿವೃಷ್ಟಿ ಮತ್ತು ಅತಿ ಪ್ರವಾಹ ಆಗಾಗ ಸಂಭವಿಸುವುದುಂಟು.
ಸಸ್ಯ ಪ್ರಾಣಿಜೀವನ : ಪಶ್ಚಿಮ ಮಲೇಷ್ಯದಲ್ಲಿ ನಿತ್ಯಹರಿದ್ವರ್ಣ ಕಾಡುಗಳಿವೆ. ಇವು ಶೇಕಡಾ 60ರಷ್ಟು ಪ್ರದೇಶ ಅವರಿಸಿವೆ. ಶೇಕಡಾ 9ರಷ್ಟು ನೆಲ ಜವುಗು ಕಾಡಿನಿಂದ ಕೂಡಿದೆ. ಇಲ್ಲಿಯ ಅರಣ್ಯಸಂಪತ್ತು ಸಮೃದ್ಧವಾದ್ದು. ಇಲ್ಲಿ ಸುಮಾರು 8000 ಜಾತಿಯ ಹೂಬಿಡುವ ಸಸ್ಯಗಳಿವೆ. ಪ್ರತಿ ಎಕರೆಯಲ್ಲೂ ಸುಮಾರು ನೂರು ಬಗೆಯ ಸಸ್ಯಗಳಿವೆ. ಎಷ್ಟೋ ಕಾಡನ್ನು ನಾಶಮಾಡಲಾಗಿದೆ. ಕಾಡು ಸವರಿದಲ್ಲಿ ಹುಲ್ಲು, ಪೊದೆ ಬೆಳೆದಿರುವ ಪ್ರದೇಶ ಶೇಕಡಾ 7ರಷ್ಟಿದೆ. ದಟ್ಟಕಾಡು ಹಾಗೂ ಕುರುಚಲು ಗಿಡಗಳ ಅರಣ್ಯಪ್ರದೇಶಗಳಲ್ಲಿ ಆನೆ, ಹುಲಿ, ಗೌರ್, ಖಡ್ಗಮೃಗ, ಟಾಪಿರ್, ಕಾಡುಹಂದಿ, ಜಿಂಕೆಗಳು, ಹುಲಿ, ನಾಗರಹಾವು, ಆಮೆ, ಮೊಸಳೆ ಮುಂತಾದ ವ್ಯೆವ್ಯಧ್ಯಮಯ ಪ್ರಾಣಿ ಲೋಕವಿದೆ.

ಪೂರ್ವ ಮಲೇಷ್ಯದ ಸಾರವಾಕ್‍ನಲ್ಲಿ ಶೇಕಡಾ 77ರಷ್ಟು ಸಬಾನಲ್ಲಿ ಶೇಕಡಾ 78 ರಷ್ಟು ದಟ್ಟವಾದ ನಿತ್ಯಹಸುರಿನ ಅರಣ್ಯಪ್ರದೇಶವಿದೆ. ಕರಾವಳಿಯಲ್ಲಿ ಜವುಗು ಕಾಡು ಇದೆ. 

ಪೂರ್ವ ಮಲೇಷ್ಯದ ಪ್ರಾಣಿ ಜೀವನ ಹೆಚ್ಚು ವೈವಿಧ್ಯಮಯವಾದದ್ದು. ಪಶ್ಚಿಮ ಮಲೇಷ್ಯದ ಪ್ರಾಣಿಗಳ ಜೊತೆಗೆ ಇಲ್ಲಿ ಒರಾಂಗುಟಾನ್, ಜೇನುಕರಡಿ, ಉದ್ದ ಮುಸುಡಿಯ ಕೋತಿ ಇವೆ.

ಜನಜೀವನ : ವಲಯದ ಜನ ಮುಖ್ಯವಾಗಿ ಗ್ರಾಮೀಣರು. ಆಗ್ನೇಯ ಏಷ್ಯದ ಇತರೆಡೆಗಳಲ್ಲಿರುವಂತೆಯೇ ಇಲ್ಲಿಯ ಜನವಸತಿಗಳಿವೆ. ಗಣೆಗಳನ್ನು ನೆಟ್ಟು ಅವುಗಳ ಮೇಲೆ ಮರದ ಗೋಡೆ ನಿಲ್ಲಿಸಿ ತೆಂಗು ಗರಿಗಳ ಮಟ್ಟೆ ಹೊದಿಸಿದ ಮನೆಗಳಲ್ಲಿ ಜೀವಿಸುವರು. ಪ್ರತಿಯೊಂದು ಮನೆಯ ಸುತ್ತಲೂ ತೆಂಗು ಬಾಳೆ ಪರಂಗಿ ಮುಂತಾದ ಗಿಡಗಳಿರುತ್ತವೆ. ಹಳ್ಳಿಗಳಲ್ಲಿ ಮೀನುಗಾರರ, ಬತ್ತ ಬೆಳೆಯುವವರ, ಹಣ ಬೆಳೆಗಳನ್ನು ಬೆಳೆಯುವ ಹಾಗೂ ಮಿಶ್ರ ಬೆಳೆ ಬೆಳೆಯುವವರ ನಾಲ್ಕು ಬಗೆ ಗ್ರಾಮಗಳನ್ನು ಇಲ್ಲಿ ಗುರುತಿಸಬಹುದು.

ನಗರಗಳು ದೊಡ್ಡ ಪಟ್ಟಣಗಳೂ ಬ್ರಿಟಷರು ಇಲ್ಲಿಗೆ ಬಂದಮೇಲೆ ನಿರ್ಮಾಣವಾದವು. ಇವು ತವರದ ಗಣಿ ಮತ್ತು ರಬ್ಬರ್ ತೋಟಗಳೆಡೆಯಲ್ಲಿವೆ. 5000ಕ್ಕಿಂತ ಹೆಚ್ಚು ಜನಸಂಖ್ಯೆಯ ಪಟ್ಟಣಗಳು 80ಕ್ಕೂ ಹೆಚ್ಚಾಗಿವೆ. ಪಟ್ಟಣಿಗರಲ್ಲಿ ಮೂರನೆಯ ಎರಡರಷ್ಟು ಮಂದಿ ಚೀನಿಯರು. ಭಾರತೀಯರು ಹಾಗೂ ಪಾಕಿಸ್ತಾನಿಯರು ಶೇಕಡಾ 10ರಷ್ಟು ಇದ್ದಾರೆ. ಮಲಯದವರು ಶೇಕಡಾ 22 ಮಾತ್ರ.. ಪಟ್ಟಣಗಳು ಸಾಮಾನ್ಯವಾಗಿ ಅಯೋಜಿತ. ಕ್ವಾಲಾಲುಂಪುರ್, ಇಪೋ, ಪಿನಾಂಗ್ ದೊಡ್ಡ ನಗರಗಳು.

ಪೂರ್ವ ಮಲೇಷ್ಯದ ಶೇಕಡಾ 85ರಷ್ಟು ಜನ ಗ್ರಾಮಸ್ಥರು. ಪ್ರದೇಶದ ಜನಾಂಗೀಯ ವೈವಿಧ್ಯ ಇಲ್ಲಿಯ ವಸತಿಗಳಲ್ಲೂ ಕಾಣಬರುತ್ತದೆ. ಪೂರ್ವ ಮಲೇಷ್ಯದ ಜನರ ಕಸುಬು ಮುಖ್ಯವಾಗಿ ಕೃಷಿ ಮತ್ತು ಮೀನುಗಾರಿಕೆ. ಸಾರವಾಕಿನ ಗ್ರಾಮಸ್ತ ಚೀನಿಯರು ರಬ್ಬರು, ಮೆಣಸು, ಹಣ್ಣು, ತರಕಾರಿ ಮುಂತಾದ ಹಣ ಬೆಳೆ ಬೆಳೆಯುತ್ತಾರೆ. ಪೂರ್ವ ಮಲೇಷ್ಯದಲ್ಲಿ 10,000ಕ್ಕಿಂತ ಹೆಚ್ಚಿನ ಜನಸಂಖ್ಯೆಯ ಪಟ್ಟಣಗಳು ಕೇವಲ 6. ಅವು ಕೊಚಿನ್, ಸೀಬೂ, ಮಿರೀ, ಸಂಡಾಕನ್, ಕೋಟ ಕಿನಬಾಲು ಮತ್ತು ಟವೌ. ಇಲ್ಲಿಯೂ ಪಟ್ಟಣಿಗರು ಬಹುತೇಕ ಚೀನೀಯರು.

ಆರ್ಥಿಕ ಪ್ರಗತಿ: ಮಲೇಷ್ಯ ಏಷ್ಯದ ಮೂರನೆಯ ಸಂಪದ್ಯುಕ್ತ ದೇಶ. ಮೊದಲನೆಯದು ಜಪಾನ್ ಎರಡನೆಯದು ಸಿಂಗಪುರ್. ಮಲೇಷ್ಯ ಪ್ರಪಂಚದಲ್ಲಿ ರಬ್ಬರ್ ಮತ್ತು ತವರನ್ನು ಅತ್ಯಧಿಕವಾಗಿ ಉತ್ಪಾದಿಸುವ ದೇಶ. ತಾಳೆ ಎಣ್ಣೆ ಉತ್ಪಾದನೆಯಲ್ಲಿ ಇದು ನೈಜೀರಿಯಕ್ಕೆ ಅನಂತರ ಬರುತ್ತದೆ. ಇತರ ಅಭಿವೃದ್ಧಿಶೀಲ ದೇಶಗಳೊಂದಿಗೆ ಹೋಲಿಸಿದರೆ ಇದು ರಸ್ತೆ, ನೀರಿನ ಸರಬರಾಜು, ವಿದ್ಯುತ್ತು ಸಾಂಸ್ಥಿಕ ವ್ಯವಸ್ಥೆ, ವಾಣಿಜ್ಯ ಹಾಗೂ ಹಣಕಾಸು ವ್ಯವಸ್ಥೆಗಳಲ್ಲಿ ಹೆಚ್ಚು ಮುಂದುವರಿದಿದೆ.
ಮಲೇಷ್ಯದ ಖನಿಜ ಸಂಪತ್ತು ಸಮೃದ್ಧ ಹಾಗೂ ವ್ಯೆವಿಧ್ಯಮಯ, ತವರ, ಕಬ್ಬಿಣದ ಅದುರು, ಬಾಕ್ಸೈಟು, ಕಲ್ಲಿದ್ದಲು, ಚಿನ್ನ, ಪಿಂಗಾಣಿ ಮಣ್ಣು, ಮೊನಾಜ್ಯೆಟ್, ಇಲ್ಮನೈಟ್, ಕೊಲಂಜೈಂಟ್, ಮಾಂಗನೀಸ್, ಟಾಂಟಲೈಟ್, ವೂಲ್ಫ್ರಮೈಟ್, ಜಿರ್ಕಾನ್ ಪಶ್ಚಿಮ ಮಲೇಷ್ಯದ ಮುಖ್ಯ ಖನಿಜಗಳು, ಆಂಟಿಮನಿ, ಪಾದರಸ, ಚಿನ್ನ, ಕಲ್ಲಿದ್ದಲು, ಪೆಟ್ರೋಲಿಯಮ್, ಬಾಕ್ಸೈಟ್, ಫಾಸ್ಫೇಟ್, ಗಾಜಿನಮರಳು ಇವು ಸಾರವಾಕಿನಲ್ಲೂ, ಚಿನ್ನ, ಕಲ್ಲಿದ್ದಲು, ಮ್ಯಾಂಗನೀಸ, ತಾಮ್ರ ಇವು ಸಬಾದಲ್ಲೂ ದೊರಕುತ್ತವೆ. ಮುಖ್ಯವಾದ ಖನಿಜಗಳು ತವರ, ಕಬ್ಬಿಣ ಅದುರು, ಬಾಕ್ಸೈಟ್, ಪೆಟ್ರೋಲಿಯಮ್ ಮತ್ತು ತಾಮ್ರ. ಅತ್ಯಂತ ಮುಖ್ಯವಾದದ್ದು ತವರ. ಇದು ಪಶ್ಚಿಮ ಮಲೇಷ್ಯದ 11 ರಾಜ್ಯಗಳ ಪೈಕಿ 9 ರಲ್ಲಿ ಸಿಗುತ್ತದೆ. ಪೂರ್ವ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಇದರ ನಿಕ್ಷೇಪಗಳಿವೆ. ಪೆಟ್ರೋಲಿಯಮ್ ನಿಕ್ಷೇಪವಿರುವುದು ಸಾರವಾಕಿನಲ್ಲಿ ಮಾತ್ರ. ತೈಲ ಗಣಿ ಮಿರೀಯಲ್ಲಿದೆ.

ಖನಿಜ ಸಂಪತ್ತಲ್ಲದೆ ಅರಣ್ಯ ಸಂಪತ್ತೂ ಮತ್ಸ್ಯ ಸಂಪತ್ತೂ ಮುಖ್ಯವಾದವು. ದಿಮ್ಮಿ, ಇದ್ದಿಲು, ಸೌದೆ, ಅರಗು, ಗೋಂದು, ಬೆತ್ತ ಮುಖ್ಯ ಅರಣ್ಯೋತ್ಪನ್ನಗಳು. ಇವು ಸ್ಥಳೀಯವಾಗಿ ಬಳಕೆಯಾಗುವುವಲ್ಲದೆ ರಫ್ತಿಗೂ ಒದಗಿ ಬರುತ್ತವೆ. ಸಾಗುವಾನಿ ಮಲೇಷ್ಯದ ವಿದೇಶಿ ವಿನಿಮಯ ಸಂಪಾದನೆಯ ಮೂರನೆಯ ಮುಖ್ಯ ಮೂಲ. ಮಲೇಷ್ಯದ ಕರಾವಳಿಯಲ್ಲಿ ವಿವಿಧ ಬಗೆಯ ಮೀನು ದೊರಕುತ್ತವೆ.

ಕಲ್ಲಿದ್ದಲು, ಸಸ್ಯಾಂಗಾರ, ಮರ ಪೆಟ್ರೋಲಿಯಮ್, ಜಲವಿದ್ಯುತ್ ಇವು ಮುಖ್ಯ ಶಕ್ತಿ ಮೂಲಗಳು. ಪೂರ್ವ ಮಲೇಷ್ಯದಲ್ಲಿ ಜಲವಿದ್ಯುತ್ತಿನ ಉತ್ಪಾದನೆಯಿಲ್ಲ. ಪಶ್ಚಿಮ ಮಲೇಷ್ಯದಲ್ಲಿ ಅನೇಕ ಜಲಪಾತಗಳು, ವಿದ್ಯುತ್ ಸಾಮಥ್ರ್ಯ ಉಳ್ಳವಾಗಿವೆ. ಕಾವುಮರಾನ್, ಬಟಾಂಗ್ ಪಡಾನ್, ಬೆಂಡೆರೊ ಇವು ಪಶ್ಚಿಮ ಮಲೇಷ್ಯದ ಮುಖ್ಯ ಜಲವಿದ್ಯುತ್ ಕೇಂದ್ರಗಳು.

ಕೃಷಿ, ಅರಣ್ಯಗಾರಿಕೆ, ಮೀನುಗಾರಿಕೆ, ಗಣಿಗಾರಿಕೆ ಮಲೇಷ್ಯದ ಮುಖ್ಯ ಕಸುಬುಗಳು. ಇಲ್ಲಿಯ ರಫ್ತುಗಳಲ್ಲಿ ಶೇಕಡಾ 90 ರಷ್ಟು ಈ ವಲಯಗಳದ್ದು ಕೃಷಿಯೇ ಬಹುಮುಖ್ಯ ಜೀವನೋಪಾಯ. ದೇಶದ ಸ್ಥೂಲ ರಾಷ್ಟ್ರೀಯ ಉತ್ಪನ್ನದ ಶೇಕಡಾ 30ರಷ್ಟು ಕೃಷಿಯಿಂದ ಬರುತ್ತದೆ. ಪಶ್ಚಿಮ ಮಲೇಷ್ಯದ ನೆಲದ ಶೇಕಡಾ 21, ಸಾರವಾಕಿನ ನೆಲದ ಶೇಕಡ 6 ಮತ್ತು ಸಾಬಾದಲ್ಲಿಯ ನೆಲದ ಶೇಕಡಾ 3 ಭಾಗ ಕೃಷಿಗೆ ಮೀಸಲು. ಮಲೇಷ್ಯದ ಮುಖ್ಯ ಆರ್ಥಿಕ ಬೆಳೆ ರಬ್ಬರ್, ಇದು ವಿದೇಶಿ ವಿನಿಮಯ ಸಂಪಾದಿಸುವ ಬಲುಮುಖ್ಯ ಉತ್ಪನ್ನ. ಇತರ ಹಣ ಬೆಳೆಗಳು ತಾಳೆ (ಎಣ್ಣೆ), ತೆಂಗು, ಆಹಾರ ಬೆಳೆ ಬತ್ತ.

ಮಲೇಷ್ಯ ಬಹುಭಾಗ ಅರಣ್ಯಾವೃತ. ಅರಣ್ಯಗಾರಿಕೆಗೆ ಈಚಿನ ವರ್ಷಗಳಲ್ಲಿ ವಿಶೇಷ ಪ್ರಾಮುಖ್ಯ ಬಂದಿದೆ. ಇಲ್ಲಿಯ ಚೌಬೀನೆಮರಕ್ಕೆ ವಿಶೇಷ ಬೇಡಿಕೆ ಇರುವದು ಇದಕ್ಕೆ ಕಾರಣ. ಇದು ಈ ದೇಶದ ಮೂರನೆಯ ಮುಖ್ಯ ಉತ್ಪನ್ನ. ಮೀನುಗಾರಿಕೆಯೂ ಪ್ರಗತಿ ಹೊಂದುತ್ತಿದೆ. ಮಲೇಷ್ಯಕ್ಕೆ ಉದ್ದನೆಯ ಕರಾವಳಿ ಇದೆ. ಈಗೀಗ ಮತ್ಸೋದ್ಯಮ ಯಾಂತ್ರೀಕರಣ ಆಗುತ್ತಿದೆ. ರಫ್ತುಗಳಲ್ಲಿ ಕಾಲು ಭಾಗ ಗಣಿ ಉತ್ಪನ್ನಗಳು. ತವರ, ಕಬ್ಬಿಣ ಅದಿರು, ಬಾಕ್ಸೈಟ, ಪೆಟ್ರೋಲಿಯಮ್ ಮುಖ್ಯ ಖನಿಜಗಳು. ತವರದಲ್ಲಿ ಮಲೇಷ್ಯಕ್ಕೆ ಪ್ರಪಂಚದಲ್ಲಿ ಮೊದಲನೆಯ ಸ್ಥಾನ.

ದೇಶದಲ್ಲಿ ಕೈಗಾರಿಕೆಗಳು ಅಷ್ಟಾಗಿ ಬೆಳೆದಿಲ್ಲ. ಅನುಭೋಗ ವಸ್ತುಗಳ ತಯಾರಿಕೆಗೆ ಆದ್ಯಸ್ಥಾನ ನೀಡಲಾಗಿದೆ. ದೇಶದಲ್ಲಿ 17 ಕೈಗಾರಿಕಾ ಕ್ಷೇತ್ರಗಳಿವೆ. ಪಶ್ಚಿಮ ಮಲೇಷ್ಯದಲ್ಲಿ ಹೆಚ್ಚಿನ ಕೈಗಾರಿಕೆಗಳಿವೆ. ಮಲೇಷ್ಯ ಮುಖ್ಯವಾಗಿ ಕಚ್ಚಾ ಸಾಮಗ್ರಿ ರಫ್ತು ಮಾಡುವ ದೇಶ. ಸಿದ್ಧ ಸರಕುಗಳನ್ನು ಅದು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತಿದೆ.

ಸಾರಿಗೆ : ಸಾರಿಗೆ ವ್ಯವಸ್ಥೆ ತಕ್ಕಮಟ್ಟಿಗೆ ಅಭಿವೃದ್ಧಿ ಹೊಂದಿದೆ. ತವರ ಮತ್ತು ರಬ್ಬರ ಉತ್ಪಾದಿಸುವ ದೇಶಗಳೊಂದಿಗೆ ಸಂಪರ್ಕ ಸಮರ್ಪಕವಾಗಿದೆ. ಸಾರವಾಕ್ ಮತ್ತು ಸಬಾಗಳಲ್ಲಿ ಮಾತ್ರ ಇದು ಅಷ್ಟು ಅಭಿವೃದ್ಧಿಯಾಗಿಲ್ಲ. ನದೀ ಸಾರಿಗೆಯೇ ಇಲ್ಲಿ ಈಗಲೂ ಮುಖ್ಯ. ಪಶ್ಚಿಮ ಮಲೇಷ್ಯದ ರಸ್ತೆಜಾಲ ಇಡೀ ಆಗ್ನೇಯ ಏಷ್ಯದಲ್ಲೇ ಅತ್ಯುತ್ತಮವಾದುದ್ದೆನಿಸಿದೆ. ಹಿಂದೆ ಅಲ್ಲಿ ಎಲ್ಲ ಬಗೆಯ ರಸ್ತೆಗಳು ಸೇರಿ ಸುಮಾರು 16100 ಕಿ.ಮೀ ಉದ್ದದ ರಸ್ತೆಗಳಿದ್ದವು. ಇದರ ಪೂರ್ವ ಕರಾವಳಿಯ ಕೋಟ ಬಹಾರುವನ್ನು ಮಧ್ಯದಲ್ಲಿ ಬರುವ ಗೆರಿಕ್ ಮೂಲಕ ಪಶ್ಚಿಮ ಕರಾವಳಿಯ ಬಟರ್‍ವರ್ತ್‍ನೊಂದಿಗೆ ಕೂಡಿಸುವ ಹೆದ್ದಾರಿ ಈಚೆಗೆ ನಿರ್ಮಿತವಾಗಿದೆ. ಪಹಾಂಗ್-ಟೆಂಗಾರಾ ಪ್ರದೇಶಕ್ಕೆ ಹೆಬ್ಬಾಗಿಲಿನಂತಿರುವ ದಕ್ಷಿಣ ಪಹಾಂಗ್ ಹೆದ್ದಾರಿ ಇನ್ನೊಂದು ಹೊಸ ಮಾರ್ಗ; ಸಾರಾವಾಕ್‍ನಲ್ಲಿ 1600 ಕಿ.ಮೀ ಮತ್ತು ಸಬಾದಲ್ಲಿ 2300 ಕಿ.ಮೀ ಉದ್ದದ ರಸ್ತೆಗಳಿದ್ದವು. ರೈಲ್ವೆ ಪಶ್ಚಿಮ ಮಲೇಷ್ಯ ಮತ್ತು ಸಬಾದಲ್ಲಿ ಅಭಿವೃದ್ಧಿ ಹೊಂದಿದೆ. ಸಬಾದಲ್ಲಿರುವ ರೈಲುಮಾರ್ಗ ಕೋಟ ಕಿನಬಾಲುವಿಗೂ ಬ್ಯೂಫೋರ್ಟ್, ಟೇನಾಮ್, ಮೆಲಲಾಪಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಮಲೇಷ್ಯದಲ್ಲಿ ಪರಂಪರೆಯಿಂದ ಬಂದಿರುವಂಥದು ಜಲ ಸಾರಿಗೆ. ಪಶ್ಚಿಮ ಮಲೇಷ್ಯದಲ್ಲಿ ನದೀ ಸಾರಿಗೆಯ ಪ್ರಾಮುಖ್ಯ ಈಗ ತಗ್ಗಿದೆ. ಪೂರ್ವ ತೀರದಲ್ಲಿ ಮಾತ್ರ ಅದು ಇನ್ನೂ ಮುಖ್ಯವಾಗಿದೆ. ಪೂರ್ವ ಮಲೇಷ್ಯದಲ್ಲಿ ಇಂದಿಗೂ ನದೀ ಸಾರಿಗೆಯೇ ಮುಖ್ಯ. ಅಲ್ಲಿಯ ನದಿಗಳು ಕಡಲ ತೀರದ ಸ್ಥಳಗಳೊಂದಿಗೆ ಒಳನಾಡಿನ ಸಂಪರ್ಕ ಕಲ್ಪಿಸುತ್ತವೆ. ಮಲೇಷ್ಯದ ಕರಾವಳಿಗಳು ಸಾಕಷ್ಟು ಉದ್ದವಾಗಿರುವುದರಿಂದ ಕರಾವಳಿಯ ಹಾಗೂ ಆಳ ಕಡಲಿನ ಸಾರಿಗೆ ಮುಖ್ಯವಾದ್ದು. ಅನೇಕ ಸಾಗರಿಕ ಹಾಗೂ ನದೀ ರೇವು ಪಟ್ಟಣಗಳಿವೆ. ಪಿನಾಂಗ ಮತ್ತು ಪೋರ್ಟ ಸ್ಟೆಟೆನ್ ದ್ಯಾಮ ಪಶ್ಚಿಮ ಮಲೇಷ್ಯದ ಮುಖ್ಯ ರೇವು ಪಟ್ಟಣಗಳು. ಪೂರ್ವ ಮಲೇಷ್ಯದಲ್ಲಿ ಮುಖ್ಯವಾದವು ಕೊಚಿನ್, ಸಿಬೂ, ಲಬುವಾನ್, ಕೋಟ, ಕಿನಬಾಲು, ಸಂಡಾಕನ್ ಟಬೌ.
ವಾಯು ಸಾರಿಗೆ ಈಚೆಗೆ ಬಲು ಶೀಘ್ರವಾಗಿ ಬೆಳೆಯುತ್ತಿದೆ. ಪೂರ್ವ ಮಲೇಷ್ಯದಲ್ಲಿ ಒಳ ಹಾಗೂ ಹೊರ ವಾಯುಸಾರಿಗೆ ಹೆಚ್ಚು ವೇಗವಾಗಿ ಬೆಳೆದಿವೆ. ಪಶ್ಚಿಮ ಮಲೇಷ್ಯದಲ್ಲಿ ಇತರ ಸಾರಿಗೆ ಸಂಪರ್ಕ ವ್ಯವಸ್ಥೆಗಳಿರುವುದರಿಂದ ಅಲ್ಲಿ ಇದರ ಬೆಳವಣಿಗೆಯ ವೇಗ ಅಷ್ಟು ಹೆಚ್ಚಿಲ್ಲ. ಕ್ವಾಲಲುಂಪೂರ್, ಕೂಚಿನ್, ಕೋಟ, ಕಿನಬಾಲುಗಳ ನಡುವೆ ಹಾಗೂ ಮಲೇಷ್ಯದ ವಿವಿಧ ರಾಜ್ಯಗಳ ನಡುವೆ ನಿಯತವಾಗಿ ಆಂತರಿಕ ವಾಯುಯಾನ ವ್ಯವಸ್ಥೆಯಿದೆ. ಇದು ಪೆಸಿಫಿಕ್ ಪ್ರದೇಶದ ಅಂತರಾಷ್ಟೀಯ ಹಾಗೂ ಆಂತರಿಕ ವಾಯುಮಾನ ವವ್ಯಸ್ಥೆಯನ್ನು ನಿರ್ವಹಿಸುತ್ತಿದೆ. 

ಮಲೇಷ್ಯದ ಇತ್ತೀಚಿನ ಸಾರಿಗೆ ಸಂಪರ್ಕ ಹೆಚ್ಚಿನ ಪ್ರಗತಿ ಸಾಧಿಸಿದೆ. 1998ರಲ್ಲಿ ಕೌಲಾಲಂಪುರ್ ವಿಮಾನ ನಿಲ್ದಾಣ ಕಾರ್ಯಾರಂಭಿಸಿತು. ಸರ್ಕಾರ ಮಲೇಷ್ಯ ವಿಮಾನ ಸಾರಿಗೆ ನಡೆಸುತ್ತಿದೆ. 1994ರಲ್ಲೆ ಏರ್ ಏಷ್ಯಾ ವಿಮಾನಸಾರಿಗೆ ಆರಂಬಿಸಲಾಗಿತ್ತು. ಮಲೇಷ್ಯದಲ್ಲಿ 94,000 ಕಿ.ಮೀ ಉತ್ತಮ ಮಾರ್ಗಸಂಪರ್ಕವಿದೆ.
ಆಡಳಿತ ವ್ಯವಸ್ಥೆ: ಮಲೇಷ್ಯ ಸಂವಿಧಾನ ಬದ್ಧ ಒಕ್ಕೂಟ ರಾಜತ್ವ. ಅದರ ಪ್ರಮುಖ (ಯಾಂಗ್ ಡಿ ಪೆರ್ಟುವಾನ್ ಅಗಾಂಗ್) ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರುವುದಿಲ್ಲ. ಮಲಯದ ಒಂಬತ್ತು ರಾಜ್ಯಗಳ ಸುಲ್ತಾನರಿಂದ ಆಯ್ಕೆಯಾಗಿ ಐದು ವರ್ಷ ಅಧಿಕಾರದಲ್ಲಿರುತ್ತಾನೆ. ಸಂಸತ್ತಿನಲ್ಲಿ ಎರಡು ಸದನಗಳಿರುತ್ತವೆ. ದಿವಾನ್ ನಗರ ಅಥವಾ ರಾಷ್ಟ್ರೀಯ ಸಭೆ ಮತ್ತು ದಿವಾನ್ ರಯಾತ್ ಅಥವಾ ಪ್ರತಿನಿಧಿಗಳ ಸಭೆ. ಪ್ರಧಾನಿ ಮತ್ತು ಸಂಪುಟ, ಸ್ವತಂತ್ರ ನ್ಯಾಯಾಂಗ, ತಟಸ್ಥ ಆಡಳಿತ, ಸೇವಾವ್ಯವಸ್ಥೆ ಉಂಟು. ಸಂಸತ್ತು ದೇಶದ ಮಹೋನ್ನತ ಶಾಸಕಾಂಗ. ಯಾವುದೇ ವಿಧೇಯಕ ಶಾಸನವಾಗಬೇಕಾದರೆ ಎರಡೂ ಸದನಗಳಿಂದ ಅಂಗೀಕೃತವಾಗಿ ರಾಷ್ಟ್ರ ಮುಖ್ಯನಿಂದ ಅನುಮೋದಿತವಾಗಬೇಕು.

ಪ್ರತಿನಿಧಿಗಳ ಸಭೆ ಬ್ರಿಟಿಷ್ ಕಾಮನ್ಸ್ ಸಭೆಯ ರೀತಿಯಲ್ಲಿರುತ್ತದೆ. ಇದರ ಸದಸ್ಯರ ಸಂಖ್ಯೆ 144. ಇದರಲ್ಲಿ 104 ಸದಸ್ಯರು ಪಶ್ಚಿಮ ಮಲೇಷಿಯವನ್ನೂ 24 ಸದಸ್ಯರು ಸಾರವಾಕನ್ನು 14 ಸದಸ್ಯರು ಸಬಾವನ್ನು ಪ್ರತಿನಿಧಿಸುತ್ತಾರೆ. ಪ್ರತಿ ಕ್ಷೇತ್ರದಿಂದಲೂ ಒಬ್ಬೊಬ್ಬ ಪ್ರತಿನಿಧಿಯನ್ನು ಸರಳ ಬಹುಮತದ ಆಧಾರದಮೇಲೆ ಆಯ್ಕೆ ಮಾಡಲಾಗುತ್ತದೆ. ಪ್ರತಿನಿಧಿಯ ಅಧಿಕಾರದ ಅವಧಿ ಐದು ವರ್ಷ. ರಾಷ್ಟ್ರಿಯ ಸಭೆ ಅಥವಾ ಸೆನೆಟಿನ ಸದಸ್ಯರ ಸಂಖ್ಯೆ 58. ಇದರ ಪೈಕಿ 32 ಸದಸ್ಯರನ್ನು ಯಾಂಗ್‍ಡಿ ಪೆರ್ಟುವಾನ್ ಪ್ರಧಾನಿಯ ಶಿಫಾರಸಿನಂತೆ ನೇಮಿಸುತ್ತಾನೆ. ಉಳಿದ 26 ಸದಸ್ಯರನ್ನು 13 ಅಂಗರಾಜ್ಯಗಳ ವಿಧಾನಸಭೆಗಳು ತಲಾ ಇಬ್ಬರಂತೆ ಆಯ್ಕೆ ಮಾಡುತ್ತವೆ. ಎರಡೂ ಸದನಗಳಲ್ಲಿ ಮತಗಳ ಸರಳ ಬಹುಮತದ ಆಧಾರದ ಮೇಲೆ ನಿರ್ಣಯಗಳಾಗುತ್ತವೆ. ಸಂವಿಧಾನದ ತಿದ್ದುಪಡಿಗೆ ಮೂರನೆಯ ಎರಡರಷ್ಟು ಬಹುಮತ ಇರಬೇಕು.

ಪ್ರಧಾನಿಯನ್ನು ಯಾಂಗ್‍ಡಿ ಪೆರ್ಟುವಾನ್ ನೇಮಕ ಮಾಡುತ್ತಾನೆ. ಅವನು ಪ್ರತಿನಿಧಿ ಸಭೆಯ ಸದಸ್ಯರಾಗಿರಬೇಕು.

ಒಕ್ಕೂಟ ಸಂಸತ್ತಿನ ಅಧಿಕಾರಗಳು ಬಹಳ ವ್ಯಾಪಕವಾಗಿವೆ. ರಕ್ಷಣೆ, ವಿದೇಶಾಂಗ ವ್ಯವಹಾರ, ಆಂತರಿಕ ಭದ್ರತೆ, ನ್ಯಾಯಪಾಲನೆ, ಪೌರತ್ವ ಇವನ್ನು ಕುರಿತಂತೆ ಶಾಸನಮಾಡುವ ಅಧಿಕಾರಗಳು ಇವುಗಳಲ್ಲಿ ಸೇರಿವೆ. ಇದರ 13 ಅಂಗ ರಾಜ್ಯಗಳ ವಿಧಾನ ಮಂಡಲಗಳು ಇಸ್ಲಾಮೀ ನ್ಯಾಯ, ಜಮೀನು, ಕುಟುಂಬ ಇತ್ಯಾದಿ ವಿಚಾರಗಳನ್ನು ಕುರಿತಂತೆ ಶಾಸನಾಧಿಕಾರ ಹೊಂದಿವೆ. ಕೆಲವು ವಿಚಾರಗಳಲ್ಲಿ ಒಕ್ಕೂಟ ಹಾಗೂ ರಾಜ್ಯಗಳೆರಡಕ್ಕೂ ಶಾಸನಮಾಡುವ ಅಧಿಕಾರ ಇದೆ. ಪ್ರತಿಯೊಂದು ರಾಜ್ಯಕ್ಕೂ ಅದರದೇ ಲಿಖಿತ ಸಂವಿಧಾನ ಉಂಟು. ಅಂತೆಯೇ ಅದರದೇ ವಿಧಾನಸಭೆಯೂ ಆಡಳಿತ ಮಂಡಲಿಯೂ ಇವೆ. ಆಡಳಿತ ಮಂಡಳಿ ವಿಧಾನ ಸಭೆಗೆ ಜವಾಬ್ದಾರಿಯಾಗಿರುತ್ತದೆ. ಸಂಸತ್ ಹಾಗೂ ರಾಜ್ಯ ವಿಧಾನಸಭೆಗಳಿಗೆ ಐದು ವರ್ಷಗಳಿಗೆ ಒಮ್ಮೆ ಚುನಾವಣೆಗಳು ನಡೆಯುತ್ತವೆ.
ಮಲೇಷ್ಯದ ನ್ಯಾಯಾಂಗಾಧಿಕಾರ ಪಶ್ಚಿಮ ಮಲೇಷ್ಯ ಮತ್ತು ಪೂರ್ವ ಮಲೇಷ್ಯಗಳ ಉಚ್ಚ ನ್ಯಾಯಾಲಯಗಳಲ್ಲೂ ಅವುಗಳ ಅಧೀನ ನ್ಯಾಯಾಲಯಗಳಲ್ಲಿಯೂ ನಿಹಿತವಾಗಿವೆ. ಉಚ್ಚ ನ್ಯಾಯಾಲಯಗಳಿಗೆ ಮೇಲ್ಪಟ್ಟು ಒಕ್ಕೂಟ ನ್ಯಾಯಾಲಯವಿದೆ. ಉಚ್ಚ ನ್ಯಾಯಾಲಯಗಳ ಮೇಲ್ಮನವಿಗಳನ್ನೂ ಕೇಳಿ ಇದು ನಿರ್ಣಯಿಸುತ್ತದೆ.
ಶಿಕ್ಷಣ : ಶಿಕ್ಷಣ ಬಯಸುವ ಪ್ರತಿಯೊಂದು ಮಗುವಿಗೂ ಒಂಬತ್ತು ವರ್ಷಗಳ ಶಿಕ್ಷಣ ನೀಡುವುದು ಸರ್ಕಾರದ ನೀತಿ. ಪ್ರಾಥಮಿಕ ಶಾಲೆಗಳಿಗೆ ಪ್ರವೇಶ ಅಧಿಕವಾಗುತ್ತಿದೆ. ಮಲಯ ವಿಶ್ವವಿದ್ಯಾಲಯ, ಪೆನಾಂಗ ವಿಶ್ವವಿದ್ಯಾಲಯ, ಮಲೇಷ್ಯ ರಾಷ್ಟ್ರೀಯ ವಿಶ್ವವಿದ್ಯಾಲಯ, ಮಾರಿತಂತ್ರ ವಿದ್ಯಾ ಕಾಲೇಜು ಒಕ್ಕೂಟ, ತಾಂತ್ರಿಕ ಕಾಲೇಜು, ಕೃಷಿ ಕಾಲೇಜು ಮತ್ತು ಹಲವು ಶಿಕ್ಷಕ ತರಬೇತಿ ಕಾಲೇಜುಗಳು ಇವೆ.

ಸಾಂಸ್ಕøತಿಕ ಜೀವನ : ಮಲಯ, ಚೀನ, ಭಾರತ, ಪಶ್ಚಿಮ ಏಷ್ಯ ಮತ್ತು ಪಾಶ್ಚಾತ್ಯ ಸಂಸ್ಕøತಿಗಳು ಇಲ್ಲಿ ಸಮನ್ವಯಗೊಂಡಿವೆ. ಮಲಯ ಮತ್ತು ಬೋರ್ನಿಯ ಸಂಸ್ಕøತಿಗಳು ಪ್ರಾಚೀನವಾದವು. ಇಸ್ಲಾಮ ಪೂರ್ವ ಕಾಲದ ಭಾರತದ ಹಾಗೂ ಪೂರ್ವ ಇಸ್ಲಾಮೀ ಪ್ರಭಾವ ಎದ್ದು ಕಾಣುತ್ತದೆ. ಮಲಯದೊಂದಿಗೆ ಭಾರತದ ಸಂಬಂಧ ಕ್ರಿ.ಶ. 4ನೆಯ ಶತಮಾನದಿಂದ 14ನೆಯ ಶತಮಾನದ ತನಕ ಬೆಳೆಯಿತು. ಇಲ್ಲಿಯ ಧರ್ಮ, ಕಲೆ, ಸಾಹಿತ್ಯಗಳ ಮೇಲೆ ಇದರ ಪ್ರಭಾವ ಅಗಾಧವಾದದ್ದು. ಮಲಕ್ಕಾದ ಮೂಲಕ ಇಲ್ಲಿಗೆ ಇಸ್ಲಾಮ 15ನೆಯ ಶತಮಾನದಲ್ಲಿ ಬಂತು.

ಇದು ಮಲಯದ ಪ್ರಧಾನ ಧರ್ಮವಾಯಿತು. 19ನೆಯ ಶತಮಾನದಲ್ಲಿ ಪಾಶ್ಚಾತ್ಯ ಪ್ರಭಾವದಿಂದ ಮಲಯದ ಜನಜೀವನದಲ್ಲಿ ವಿಶೇಷ ಬದಲಾವಣೆಗಳಾದುವು. ಹೀಗೆ ಮಲಯದ ಮೇಲೆ ಹಲವು ಧರ್ಮ ಸಂಸ್ಕøತಿಗಳ ಪ್ರಭಾವ ಬಿದ್ದಿದೆ. ಪ್ರಾಚೀನಕಾಲದಲ್ಲಿ ಇಲ್ಲಿಗೆ ಬಂದ ಚೀನಿಯರು ಇಲ್ಲಿಯವರೊಂದಿಗೆ ಬೆರೆತರು. 19-20 ಶತಮಾನಗಳಲ್ಲಿ ಬಂದವರು ವಿಶಿಷ್ಟವಾಗಿ ಉಳಿದಿದ್ದಾರೆ. ಈಚೆಗೆ ಭಾರತೀಯರು ಇಲ್ಲಿಯ ಕಾಫಿ ಮತ್ತು ರಬ್ಬರ್ ತೋಟಗಳಲ್ಲಿ ದುಡಿಮೆಗಾರರಾಗಿ ಬಂದರು. ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ಮಲೇಷ್ಯದವರು ಪಾಶ್ಚಾತ್ಯ ಸಂಸ್ಕøತಿಗೂ ಮಾರುಹೋಗಿದ್ದಾರೆ. ಆದರೆ ಗ್ರಾಮೀಣ ಜನಜೀವನದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ನಗರಗಳು ತೀವ್ರ ಸಾಂಸ್ಕøತಿಕ ಪರಿವರ್ತನೆಗೆ ಒಳಗಾಗಿವೆ.

ಇತಿಹಾಸ : ಮಲಯದಲ್ಲಿ ಕನಿಷ್ಟ 6000 ವರ್ಷಗಳಿಂದ ಜನ ವಾಸಿಸುತ್ತಿದ್ದಾರೆ. ವಿವಿಧ ಶಿಲಾಯುಗ ಸಂಸ್ಕøತಿಗಳ ಹಾಗೂ ಪೂರ್ವ ಕಂಚಿನ ಯುಗದ ನಾಗರಿಕತೆಯ ಕುರುಹುಗಳು ಇಲ್ಲಿ ದೊರೆತಿವೆ.

ಕ್ರಿ.ಪೂ. 2ನೆಯ ಶತಮಾನದ ಆದಿಯಲ್ಲಿ ಭಾರತೀಯ ಸಾಹಸಿಗಳು ಇಲ್ಲಿಗೆ ಬರತೊಡಗಿದರು. ಸುಮಾರು 1000 ವರ್ಷಗಳ ಕಾಲ ಮಲಯ ಪರ್ಯಾಯ ದ್ವೀಪವೂ ಸೇರಿ ಇಡೀ ಆಗ್ನೇಯ ಏಷ್ಯ ಭಾರತದ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಭಾವಕ್ಕೆ ಒಳಗಾಗಿ ಸ್ಥಳೀಯ ಹಾಗೂ ಭಾರತೀಯ ಅಂಶಗಳು ಮಿಳಿತವಾದುವು. ಈ ಪ್ರಭಾವದ ಅಭಿವ್ಯಕ್ತಿಯಾಗಿ ಹಲವಾರು ರಾಜ್ಯಗಳೂ ಚಕ್ರಾಧಿಪತ್ಯಗಳೂ ಇಲ್ಲಿ ಹುಟ್ಟಿ ಮೆರೆದುವು. 3ನೆಯ ಶತಮಾನದಲ್ಲಿ ದುನ್‍ಸುನ್ ರಾಜ್ಯ ಮಲಯದ ಈಶಾನ್ಯ ಭಾಗದಲ್ಲಿ ಪ್ರವರ್ಧಮಾನ ಸ್ಥಿತಿಯಲ್ಲಿತ್ತು. 6ನೆಯ ಶತಮಾನದಲ್ಲಿ ಸ್ಥಾಪಿತವಾಗಿದ್ದಿರಬಹುದಾದ್ದು ಚಿಟು ರಾಜ್ಯ. ಭಾರತೀಯ ಪ್ರಭಾವದ ಅತ್ಯಂತ ಮುಖ್ಯ ರಾಜ್ಯ ಲಂಕಾಸುಕ. ಪೆನಾಂಗ್ ದ್ವೀಪದ ಎದುರಿಗಿನ ಕೆಡದಲ್ಲಿಯ ದೇವಾಲಯ ಸಂಕೀರ್ಣವನ್ನು ಇದು ಒಳಗೊಂಡಿತ್ತು. ಇಂದಿಗೂ ಆ ಕಾಲದ ಸಂಸ್ಕøತಿಯ ಕುರುಹುಗಳು ಮಲೇಷ್ಯದ ಆಚಾರವಿಚಾರ ಭಾಷೆ ಸಂಸ್ಕøತಿಗಳಲ್ಲಿ ಕಂಡುಬರುತ್ತವೆ.

ಮಲಯ ಪರ್ಯಾಯದ್ವೀಪದ ರಾಜ್ಯಗಳು ಉತ್ತರದ ಸೈಯಾಮ್ ಅಥವಾ ಕಾಂಬೋಡಿಯಾದ ಇಲ್ಲವೇ ದಕ್ಷಿಣದ ಸುಮಾತ್ರ ಮತ್ತು ಜಾವಾದ ಚಕ್ರಾಧಿಪತ್ಯಗಳ ಅಧೀನದಲ್ಲಿರುತ್ತಿದ್ದುವು. ಸಿಂಗಪುರ ದ್ವೀಪದ ತುಮಾಸಿಕ ರಾಜ್ಯ 14ನೆಯ ಶತಮಾನದಲ್ಲಿ ಮೊದಲು ಶ್ರೀವಿಜಯನ ಅಧೀನದಲ್ಲಿತ್ತು. ಅನಂತರ ಜಾವಾದ ಮಜಪಹಿತ್ ಚಕ್ರಾಧಿಪತ್ಯಕ್ಕೆ ಅಧೀನವಾಗಿತ್ತು. ತುಮಾಸಿಕ್‍ನ ದೊರೆ ತನ್ನ ರಾಜ್ಯವನ್ನು ಸ್ವತಂತ್ರಗೊಳಿಸಲು ಯತ್ನಿಸಿ ಸೋತು ಮಲಕ್ಕಾಗೆ ಓಡಿಹೋಗಿ ಅಲ್ಲಿ ರಾಜ್ಯವಾಳತೊಡಗಿದ.

15ನೆಯ ಶತಮಾನದಲ್ಲಿ ಮಲಕ್ಕಾ ಪ್ರಬಲ ರಾಜ್ಯವಾಯಿತು. ಇದು ಇಸ್ಲಾಮ್ ಪ್ರಸಾರ ಕೇಂದ್ರವಾಯಿತು. ಮೊದಲು ಪೂರ್ವ ಬಂಗಾಲದ ಹಾಗೂ ಭಾರತದ ಇತರ ಭಾಗಗಳ ವ್ಯಾಪಾರಿಗಳು ಇಲ್ಲಿಗೆ ಬರುತ್ತಿದ್ದರು. ಅವರ ಮೂಲಕ ಇಸ್ಲಾಮ್ ಇಲ್ಲಿಗೆ ಬಂತು. ಮಲಕ್ಕಾದಿಂದ ಇತರೆಡೆಗಳಿಗೆ ಇದು ಹರಡಿತು. ಹಿಂದೂ ನಂಬಿಕೆ ಹಾಗೂ ಪದ್ಧತಿಗಳು ಬಾಲಿ ದ್ವೀಪದಲ್ಲಿ ಮಾತ್ರ ಉಳಿದುಕೊಂಡವು.

ಮಲಕ್ಕಾದ ಸುಲ್ತಾನರು ಮಲಯ ಪರ್ಯಾಯ ದ್ವೀಪವನ್ನು ಗೆದ್ದುಕೊಂಡಾಗ ಇಸ್ಲಾಮ ಇಲ್ಲಿಗೂ ಬಂತು. ಒಂದು ಕಾಲದಲ್ಲಿ ಈ ಪ್ರದೇಶವನ್ನಾಳಿದ ಪರಮೇಶ್ವರನ ಮೊಮ್ಮಗ ಮುಜಾಫರ ಷಾ(1446-59) ಟುನ್ ಪೆರಾಕ್ ಎಂಬುವನನ್ನು ಪ್ರಧಾನಿಯಾಗಿ ನೇಮಿಸಿದ. ಟುನ್‍ಪೆರಾಕ್ ಮಲಾಕ್ಕದ ಮೇಲೆ ದಂಡೆತ್ತಿಬಂದ ಸೈಯಾಮಿಗಳನ್ನು ಸೋಲಿಸಿದ. ಅವನು ಸುಲ್ತಾನನಾಗದಿದ್ದರೂ ಸುಮಾರು 40 ವರ್ಷಗಳ ಕಾಲ ಮಲಕ್ಕಾವನ್ನಾಳಿದ. ರಾಜ್ಯವನ್ನು ವಿಸ್ತರಿಸಿದ. ಜೊತೆಗೆ ಇಸ್ಲಾಮ್ ಧರ್ಮ ಹಬ್ಬಿತು. ಮುಂದೆ ಮಲಯದಲ್ಲಿ ಹಲವು ಸುಲ್ತಾನರು ಆಳತೊಡಗಿದರು.

15ನೆಯ ಶತಮಾನ ಮುಗಿಯುವುದಕ್ಕೂ ಬಹಳ ಹಿಂದೆಯೇ ಮಲಕ್ಕಾದ ಕೀರ್ತಿ ಯೂರೋಪಿಗೆ ಹಬ್ಬಿತ್ತು. ಸಂಬಾರ ಪದಾರ್ಥಗಳ ವ್ಯಾಪಾರಿಗಳು ಇದರಿಂದ ಆಕರ್ಷಿತರಾಗಿದ್ದರು. 1509ರಲ್ಲಿ ಇಲ್ಲಿಗೆ ಪೋರ್ಚುಗೀಸರು ಬಂದರು. ಇದು ಏಷ್ಯಾದಲ್ಲಿ ಯೂರೊಪಿಯನರ ಆಳ್ವಿಕೆಗೆ ನಾಂದಿಯಾಯಿತು. 1511ರಲ್ಲಿ ಪೊರ್ಚುಗೀಸರು ಮಲಕ್ಕಾವನ್ನು ವಶಪಡಿಸಿಕೊಂಡರು.

ಪೋರ್ಚುಗೀಸರು ಅಷ್ಟೇನೂ ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲವಾದ್ದರಿಂದ ಮಲಕ್ಕಾವನ್ನು ಗೆಲ್ಲಲು ಸುಮಾತ್ರದ ಅಚೆಹ್ ರಾಜ್ಯ ಯತ್ನಿಸಿತು. ಪೋರ್ಚುಗೀಸರು ಹಾಗೂ ಹೀಗೂ ಇಲ್ಲಿ ಕಚ್ಚಿ ಕುಳಿತಿದ್ದರು. 1596ರಲ್ಲಿ ಜಾವಾದಲ್ಲಿ ನೆಲೆಯೂರಿದ ಡಚ್ಚರು ಅಚೆಹ್‍ನೊಂದಿಗೆ ಸ್ನೇಹ ಬೆಳೆಸಿದರು. ಪೋರ್ಚುಗೀಸರು ಜೊಹೋರ್‍ನ ಸಖ್ಯ ಬೆಳೆಸಿದರೂ ಕೊನೆಗೆ ಅಚೆಹನ ಕೈ ಮೇಲಾಯಿತು. 1633ರಲ್ಲಿ ಡಚ್ಚರು ಮಲಕ್ಕಾಗೆ ಮುತ್ತಿಗೆ ಹಾಕಿದರು. ಕೊನೆಗೆ 1641ರಲ್ಲಿ ಪೋರ್ಚುಗೀಸರು ಸೋಲಬೇಕಾಯಿತು. ದೀರ್ಘಕಾಲದ ಮುತ್ತಿಗೆಯಿಂದ ಮಲಕ್ಕಾದ ಪ್ರಾಮುಖ್ಯ ಇಳಿಮುಖವಾಯಿತು.

17ನೆಯ ಶತಮಾನದ ಉತ್ತರಾರ್ಧದಲ್ಲಿ ಸುಮಾತ್ರದ ಮಿನಾಂಗಾಕು ಜನರು ಮಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರತೊಡಗಿದರು. ಮಲಕ್ಕಾದೊಂದಿಗೆ ವ್ಯಾಪಾರದಿಂದ ಲಾಭವೇನೂ ಇಲ್ಲವೆಂಬುದನ್ನರಿತ ಡಚ್ಚರು ಅದನ್ನು ಅಲಕ್ಷಿಸಿ ಜಾವಾದತ್ತ ಲಕ್ಷ್ಯ ಹರಿಸತೊಡಗಿದರು. ಪೂರ್ವದಿಂದ ಜನರು ಮಲಯಕ್ಕೆ ವಲಸೆ ಬರತೊಡಗಿದರು.

ಕ್ರಮೇಣ ಬ್ರಿಟಿಷರೂ ಈ ಪ್ರದೇಶದಲ್ಲಿ ಅಸಕ್ತಿ ವಹಿಸತೊಡಗಿದರು. ಈಸ್ಟ ಇಂಡಿಯಾ ಕಂಪನಿ 1786ರಲ್ಲಿ ಪೆನಾಂಗ್ ದ್ವೀಪವನ್ನು ಪಡೆದುಕೊಂಡಿತು. 1795ರಲ್ಲಿ ಬ್ರಿಟಿಷರು ಮಲಕ್ಕಾವನ್ನು ಹಿಡಿದರು. 1819ರಲ್ಲಿ ಸಿಂಗಪುರದಲ್ಲಿ ಅವರು ಸ್ವಾಸ್ಥ್ಯ ಸ್ಥಾಪಿಸಿದರು. ಡಚ್ಚರೊಂದಿಗೆ ಇಂಗ್ಲಿಷರು ಮಾಡಿಕೊಂಡ ಒಪ್ಪಂದದಿಂದ ಈ ಪ್ರದೇಶದ ಮೇಲೆ ಇಂಗ್ಲಿಷರ ಹಿಡಿತ ಸ್ಥಾಪಿತವಾಯಿತು.

1869ರಲ್ಲಿ ಸೂಯೆಜ್ ಕಾಲುವೆಯ ಆರಂಭದೊಂದಿಗೆ ಇಡೀ ಆಗ್ನೇಯ ಏಷ್ಯದ ಭವಿಷ್ಯ ನಿರ್ಧಾರವಾಯಿತು. ಪ್ರಬಲನಾಗಿದ್ದ ಜೋಹೊರ್ ಸುಲ್ತಾನ ಅಬೂಬಕರನನ್ನು ಬಿಟ್ಟರೆ ಉಳಿದ ರಾಜ್ಯಗಳನ್ನು ಆಳುತ್ತಿದ್ದವರು ದುರ್ಬಲರಾಗಿದ್ದರು. 19ನೆಯ ಶತಮಾನದ ಆರಂಭದಲ್ಲಿ ತವರದ ಆಸೆಯಿಂದ ಮಲಯಕ್ಕೆ ಬರತೊಡಗಿದ ಚೀನಿಯರು ಇಲ್ಲಿಯವರೊಂದಿಗೆ ಬೆರೆಯಲಿಲ್ಲ. ಇಂದಿಗೂ ಅಲ್ಲಿ ಚೀನೀಯರಿಗೂ ಮಲಯರಿಗೂ ಆಗಾಗ ಕೋಮುವಾರು ಹೋರಾಟಗಳಾಗುತ್ತಲೇ ಇರುತ್ತವೆ. ಈ ಹೋರಾಟವೇ ನೆವವಾಗಿ ಬ್ರಿಟಿಷರು 1874ರಲ್ಲಿ ಮಧ್ಯೆ ಪ್ರವೇಶಿಸಿದರು. ಕ್ರಮೇಣ ಅಲ್ಲಿಯ ಸುಲ್ತಾನರನ್ನು ತಮ್ಮ ಆಶ್ರಿತರನ್ನಾಗಿ ಮಾಡಿದರು. 

ಬ್ರಿಟಿಷರ ರಾಜಕೀಯ ಅಧಿಕಾರದೊಂದಿಗೆ ಮಲಯದ ಆರ್ಥಿಕ, ಸಾಮಾಜಿಕ ಪರಿವರ್ತನೆ ಆರಂಭವಾಯಿತು. ರೈಲ್ವೆ ಹಾಗೂ ರಸ್ತೆಗಳು ನಿರ್ಮಿತವಾದವು. ತವರ ಹಾಗೂ ರಬ್ಬರ ಉತ್ಪಾದನೆಗೆ ಪ್ರೋತ್ಸಾಹ ದೊರಕಿತು. ಬ್ರಿಟಿಷ ಬಂಡವಾಳದ ಕಂಪನಿಗಳು ಸ್ಥಾಪಿತವಾದವು. 1870ರ ದಶಕದಲ್ಲಿ ರಬ್ಬರ ಬೆಳೆ ಆರಂಭವಾಯಿತು. ಹಿಂದೆಯೇ ಕಾಫಿ ತೋಟಗಳು ಆದವು.

ಮಲಯದ ವಿವಿಧ ಮತ ಸಂಸ್ಕøತಿಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ನೀತಿಯನ್ನು ಬ್ರಿಟಿಷರು ಅನುಸರಿಸಿದರು. 1941ರ ತನಕ ಬ್ರಿಟಿಷರಿಗೆ ಇಲ್ಲಿ ಯಾರೂ ಸವಾಲೊಡ್ಡುವ ಸ್ಥಿತಿಯಲ್ಲಿರಲಿಲ್ಲ. ಆದರೆ ಎರಡನೆಯ ಮಹಾಯುದ್ಧದ ಕಾಲದಲ್ಲಿ ಜಪಾನ ಇದರತ್ತ ಕಣ್ಣು ಹಾಯಿಸಿ 1942ರಲ್ಲಿ ಆಕ್ರಮಿಸಿಕೊಂಡಿತು. 1945ರಲ್ಲಿ ಮತ್ತೆ ಬ್ರಿಟಿಷರು ಬಂದು ಇಡೀ ಮಲಯವನ್ನು ಒಂದೇ ರಾಜ್ಯವಾಗಿ ಮಾಡಲು ಯತ್ನಿಸಿದಾಗ ಮಲಯನರು ಮತ್ತೆ ಅದರ ಅಧೀನದಲ್ಲಿರಲು ಇಚ್ಛಿಸಲಿಲ್ಲ. 1946ರಲ್ಲಿ ಸಂಯುಕ್ತ ಮಲಯ ರಾಷ್ಟ್ರೀಯ ಸಂಸ್ಥೆ ಸ್ಥಾಪಿತವಾಯಿತು. 1948ರಲ್ಲಿ ಮಲಯನ್ ಕಮ್ಯುನಿಸ್ಟಪಕ್ಷ ಬ್ರಿಟಿಷ ವಸಾಹತುದಾರರ ವಿರುದ್ಧ ಕದನ ಆರಂಭಿಸಿತು. 1952ರಲ್ಲಿ ಸಂಯುಕ್ತ ಮಲಯ ರಾಷ್ಟೀಯ ಸಂಸ್ಥೆಯೂ ಮಲಯ ಚೀನೀ ಸಂಘವೂ ಕಮ್ಯುನಿಸ್ಟರ ವಿರುದ್ಧ ಸಂಘಟಿತವಾದವು. ಇವೆರಡರ ಸಂಯುಕ್ತ ರಂಗ 1955ರ ಚುನಾವಣೆಯಲ್ಲಿ ಜಯಗಳಿಸಿತು. ಟುಂಕು ಅಬ್ದುಲ್ ರೆಹಮಾನರ ನಾಯಕತ್ವದಲ್ಲಿ ಸರ್ಕಾರ ಸ್ಥಾಪಿತವಾಯಿತು. 1957ರ ಆಗಸ್ಟ್ 31ರಂದು ಮಲಯ ಸ್ವತಂತ್ರವಾಯಿತು. 1959ರಲ್ಲಿ ಸಿಂಗಪುರ ಪೂರ್ಣ ಸ್ವಾಧಿಕಾರ ಪಡೆಯಿತು. ಸಿಂಗಪುರ, ಮಲಯ, ಸಾರವಾಕ್, ಸಬಾಗಳು ಸೇರಿದ ಮಲೇಷ್ಯ ಸಂಯುಕ್ತರಾಜ್ಯ 1963ರಲ್ಲಿ ರೂಪುಗೊಂಡಿತು. ಆದರೆ 1965ರಲ್ಲಿ ಸಿಂಗಪುರ ಪ್ರತ್ಯೇಕವಾಯಿತು, ಉಳಿದ ಮೂರು ರಾಜ್ಯಗಳು ಮಲೇಷ್ಯ ಸಂಯುಕ್ತ ರಾಜ್ಯದಲ್ಲಿ ಉಳಿದಿವೆ.							
	(ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ